ಉಲ್ಗು ಖಾನ್
ಚಂಗೇಸ್‍ಖಾನನ ಮನೆತನಕ್ಕೆ ಸೇರಿದವ. ಕ್ರಿ.ಶ. 1292ರಲ್ಲಿ ಜಲಾಲುದ್ದೀನ್ ಖಿಲ್ಜಿಯ ಆಳ್ವಿಕೆಯಲ್ಲಿ ಭಾರತದ ವಾಯುವ್ಯಭಾಗವನ್ನು ಮುತ್ತಿದ ಪ್ರಬಲವಾದ ಮುಂಗೋಲರ ಗುಂಪಿನ ನಾಯಕ. ಆಗ ಸುಲ್ತಾನನ ಸೈನ್ಯ ಮಂಗೋಲರ ದಾಳಿಯನ್ನು ಸಾಹಸದಿಂದ ಎದುರಿಸಿ ಸೋಲಿಸಿತು. ನಡೆದ ಒಪ್ಪಂದದ ಪ್ರಕಾರ ಮುಂಗೋಲ್ ಸೈನ್ಯ ಭಾರತದಿಂದ ಹಿಂದಿರುಗಿತು. ಉಲ್ಗು ಖಾನ್ ಮತ್ತು ಆತನ ಹಿಂಬಾಲಕರಲ್ಲನೇಕರು ಇಸ್ಲಾಂ ಮತವನ್ನು ಸ್ವೀಕರಿಸಿ ದೆಹಲಿಯ ಸಮೀಪದಲ್ಲಿ ನೆಲೆಸಿದರು. ಇವರಿಗೆ ನ್ಯೂ ಮುಸ್ಲಿಮ್ಸ್ ಎಂದು ಹೆಸರಾಯಿತು. ಇವರು ಕ್ರೂರಿಗಳು. ಆಗಾಗ ಸುಲ್ತಾನನಿಗೆ ತೊಂದರೆಯನ್ನುಂಟುಮಾಡುತ್ತಿದ್ದರು. ಅಲ್ಲಾವುದ್ದೀನ್ ಸುಲ್ತಾನನಾದ ಮೇಲೆ (1296) ಉಲ್ಗು ಖಾನ್ ಮತ್ತು ಆತನ ಮುಖ್ಯ ಸಂಬಂಧಿಗಳನ್ನೆಲ್ಲ ಕಣ್ಣು ಕೀಳಿಸಿ ಸೆರೆಯಲ್ಲಿಡಿಸಿದ. ತನ್ನ ಸಿಂಹಾಸನಾಪಹರಣಕ್ಕೆ ಒಳಸಂಚು ನಡೆಸುತ್ತಿದ್ದರೆಂಬ ಕಾರಣಕ್ಕಾಗಿ ಅಲ್ಲಾವುದ್ದೀನ್ ಸುಮಾರು ಮೂವತ್ತು ಸಾವಿರ ನ್ಯೂ ಮುಸ್ಲಿಮರನ್ನು ಒಂದೇ ದಿನದಲ್ಲಿ ಕತ್ತರಿಸಿಹಾಕಿಸಿದನೆಂದು ಹೇಳಲಾಗಿದೆ.					
	(ಜೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ